ಪ್ರಶಸ್ತಿ ಕಾವ್ಯ- 
	ಪ್ರಾಚ್ಯ ಸಾಹಿತ್ಯದ ವಿಶಿಷ್ಟ ಪರಂಪರೆಯನ್ನಬಹುದಾದ ಒಂದು ಕಾವ್ಯ ಪ್ರಕಾರ. ಸಂಸ್ಕøತ, ಪ್ರಾಕೃತ, ಕನ್ನಡ, ಮುಂತಾಗಿ ಎಲ್ಲ ಭಾಷೆಗಳಲ್ಲೂ ಇಂಥ ಕಾವ್ಯಗಳೂ ದೊರೆಯುತ್ತವೆ. ಆದರೆ ಇದು ಪಾಶ್ಚಾತ್ಯ ಸಾಹಿತ್ಯದಲ್ಲಿ ಅಷ್ಟಾಗಿ ಇಲ್ಲ. ಪುರಾಣಯುಗದ ಮಹಾಪುರುಷರನ್ನು ಮಹಾಕಾವ್ಯಗಳು ಬಣ್ಣಿಸಿದರೆ, ಸಮಕಾಲೀನ ರಾಜಾದಿಗಳನ್ನು ಕೊಂಡಾಡುವುದಕ್ಕೆ ಪ್ರಶಸ್ತಿಗಳನ್ನು ಆಸ್ಥಾನ ಕವಿಗಳು ಬರೆಯುತ್ತಿದ್ದರು. ಮಹಾಕವಿಗಳು ಯಶಸ್ವಿಯಾಗಿ ಬರೆದರೆ ಪ್ರಶಸ್ತಿಕಾರರು ತತ್ಕಾಲದಲ್ಲಿ ದೊರೆಯುವ ರಾಜಮನ್ನಣೆಗೆ ಬರೆದರು. ಭಾರತ ಭೂಮಿಯಲ್ಲಿ ದಾನಿಗಳನ್ನು, ಪೋಷಕರನ್ನು, ಅರಸರನ್ನು, ಉತ್ಪ್ರೇಕ್ಷೆ ಅತಿಶಯೋಕ್ತಿಗಳ ಮೂಲಕ ಪರಿಪರಿಯಾಗಿ ಬಣ್ಣಿಸುವ ಪರಿಪಾಠ ಋಗ್ವೇದ ಕಾಲದಿಂದಲೂ ಕಾಣಬರುತ್ತದೆ. ಭಾರತದ ಇತಿಹಾಸದಲ್ಲಿ ಬರುವ ದೊಡ್ಡ ರಾಜರಂತೆ ಸಣ್ಣ ಸಣ್ಣ ಅರಸರೂ ಕವಿಗಳಿಗೆ ಆಸ್ಥಾನದಲ್ಲಿ ಆಶ್ರಯವೀಯುತ್ತಿದ್ದು. ಅಪಾರವಾದ ಪ್ರಶಸ್ತಿ ರಚನೆಗಳಿಗೆ ಕಾರಣರಾಗಿದ್ದಾರೆ. ಭಾರತದ ಶಿಲಾಶಾಸನಗಳಲ್ಲಿ ದೊರೆಯುವ ಸಾಹಿತ್ಯವೆಲ್ಲ ಪ್ರಾಯಿಕವಾಗಿ ಪ್ರಶಸ್ತಿಗಳೇ ! ರಾಜರ ಶೌರ್ಯ, ಔದಾರ್ಯ ಮುಂತಾದುವನ್ನು ಮುಗಿಲಿನೆತ್ತರಕ್ಕೇರಿಸುವ ಆತ್ಯುಕ್ತಿಗಳೇ. ಪಂಪ ಹೇಳುವ 'ಚಕ್ರಿವೃಂದದ ಚಲದ. ಆಯದ ಆಯತಿಯ, ಬೀರದ, ಚಾಗದ, ಮಾತುಗಳ್ ಪೊದಳ್ದೊದವಿರೆ ತತ್ಪ್ರಶಸ್ತಿಗಳೊಳ್ ಹೊಸ ವಿಜಯ ಪ್ರಶಸ್ತಿಯನ್ನು ಕೊರೆಯಲು ಬೆಟ್ಟದಲ್ಲಿ ಕಲ್ಲಿಲ್ಲವೆಂಬ ಮಾತಿನ ವೈಖರಿ ಪ್ರಶಸ್ತಿಕಾರನಿಗೆ ಸಹಜ.

ದೇವಾಂಗನೆಯರ್ ಪಾಡುವರಾವನ ಜಸಮಂ ಕುಳಾಚಳಾವಳಿಯೊಳ್ |
ಶೌರ್ಯವಷ್ಟಂಭದಿನಾಳ್ದವನಾವಂ ಷಟ್ಖಂಡಮುಡಳಕ್ಷಿತಿತಳಮಂ ||
ಆತಂ ಭರತೇಶ್ವರನಿಂತೀ ತೆ¾ದಿಂ ನೆಗಳ್ದ ತನ್ನ ಕೀರ್ತಿಯನೀ |
ವಿಖ್ಯಾತವೃಷಭಾದ್ರಿಯೊಳ್ ಸುರಗೀತಯಶಂ ನಿ¾ುಸಿದಂ ನೆಲಂ ನಿಲ್ವಿನೆಗಂ ||

ಈ ಪದ್ಯ ಪ್ರಶಸ್ತಿ ಕಾವ್ಯದ ಒಂದು ಮಾದರಿ. ಭರತ ಚಕ್ರವರ್ತಿಯಂಥ ಮಹಾಪುರುಷರನ್ನು ಬಣ್ಣಿಸುವ ಆತ್ಯುಕ್ತಿಗಳನ್ನೇ ಸಾಧಾರಣ ವ್ಯಕ್ತಿಗಳನ್ನು ಹೊಗಳುವುದಕ್ಕೂ ಪ್ರಶಸ್ತಿ ಕವಿಗಳು ಧಾರಾಳವಾಗಿ ಬಳಸಿದರು. ರುದ್ರದಾಮನ ಜುನಾಗಢ ಪ್ರಶಸ್ತಿ (ಕ್ರಿ.ಶ. 150). ಸಮುದ್ರಗುಪ್ತನ ಪ್ರಶಸ್ತಿ (ಕ್ರಿ.ಶ. 350). ಯಶೋಧರ್ಮನ ಸ್ತಂಭ ಪ್ರಶಸ್ತಿ (ಕ್ರಿ.ಶ. 532), ಐಹೊಳೆ ಪುಲಿಕೇಶಿ ಪ್ರಶಸ್ತಿ (ಕ್ರಿ.ಶ. 634)-ಮುಂತಾದವು ಇತಿಹಾಸ ಪ್ರಸಿದ್ಧವಾಗಿರುವುದಷ್ಟೇ ಅಲ್ಲ; ಕಾವ್ಯದೃಷ್ಟಿಯಿಂದಲೂ ಗಮನಾರ್ಹವಾಗಿವೆ. ಸಮುದ್ರಗುಪ್ತನ ಪ್ರಶಸ್ತಿಕಾರ ಹರಿಷೇಣ, ಪುಲಿಕೇಶಿಯ ಪ್ರಶಸ್ತಿಕಾರ ರವಿಕೀರ್ತಿ. ಇದರ ಹೆಸರು ಉಕ್ತವಾಗಿರುವುದು ಅಜ್ಞಾತ ಪ್ರಶಸ್ತಿ ಕವಿಗಳ ಮಾಲೆಗೆ ಅಪವಾದದಂತೆ. ಹೊಲ್ಲದ ನೃಪರಿಗೆ ಇಲ್ಲದ ಗುಣಗಳನ್ನಿಟ್ಟು ಸೊಲ್ಲಿಪ, ಈ ಕೃತಿಮಾರ್ಗ ಮಹಾಕವಿಗಳದ್ದಾಗಲಾರದು. `ಮನುಜರ ಮೇಲೆ, ಸಾವವರ ಮೇಲೆ, ಕನಿಷ್ಠರ ಮೇಲೆ, ಪದ್ಯಮಂ ತನತನಗಿಂದ್ರ ಚಂದ್ರ ರವಿ ಕರ್ಣ ರಧೀಚಿ ಬಲೀಂದ್ರನೆಂದ ತಾನನವರತ ಪೊಗ¾ು ಕೆಡಬೇಡಲೆ ಮಾನವ ಎಂಬ ಪ್ರತಿಭಟನೆ ಸಾಹಿತ್ಯದಲ್ಲಿ ಕೇಳಿಬರಲು ಬಹಳ ದಿನ ಬೇಕಾಗಿಲ್ಲ. 

ದೇವತೆಗಳ ಮಹಿಮೆಯನ್ನು ಭಕ್ತಿಯಿಂದ ಕೊಂಡಾಡುವಾಗ ಬರುವ ಕಾವ್ಯ ಸ್ತೋತ್ರ, ಇಲ್ಲವೆ ಸೂಕ್ತ ಎನಿಸುತ್ತದೆ ಋಗ್ವೇದದ 1025 ಸೂಕ್ತಗಳಲ್ಲಿ ಕೇವಲ ನಾಲ್ಕೆಂಟು ಮಾತ್ರ ವ್ಯಕ್ತಿ ಪ್ರಶಂಸೆಗೆ ಮೀಸಾಲಾಗಿರುವ ದಾನುಸ್ತುತಿಗಳು, ನಹುಷತ್ರಸದಸ್ಯು-ಮುಂತಾದ ಅರಸರ ಸ್ತುತಿಗಳು. ಈ ಸುತ್ತಿಕಾರರು ಯಾಜ್ಞಿಕರು. ಉತ್ತಮ ಮಟ್ಟದ ಕವಿಗಳಲ್ಲ.

ಆದರೆ ಉಜ್ಜ್ವಲ ಪ್ರತಿಭಾಶಾಲಿಗಳಾದ ಬಾಣನಂತ ಮಹಾಕವಿಗಳು ತಮ್ಮ ರಾಜರನ್ನು ಮೆಚ್ಚಿಸಲು ಹರ್ಷಚರಿತೆಯೇ ಮೊದಲಾದ ದೊಡ್ಡ ಕೃತಿಗಳನ್ನು ರಚಿಸತೊಡಗಿದಾಗ, ಪ್ರಶಸ್ತಿ ಕಾವ್ಯದ ಮೇರೆ ಶಾಸನಗಳಿಗೆ ಮೀಸಲಾಗದೆ ವೈಶಾಲ್ಯವನ್ನು ಪಡೆಯಿತು. ಮೇಲ್ನೋಟಕ್ಕೆ ಐತಿಹಾಸಿಕ ಮಹಾಕಾವ್ಯದಂತೆ ಕಂಡರೂ ವಸ್ತುತಃ ವಿಸ್ತøತ ಪ್ರಶಸ್ತಿ ಕಾವ್ಯವನ್ನು ಪರಿಮಳ (ನವಸಾಹಸಾಂಕಚರಿತ), ಬಿಲ್ಹಣ (ವಿಕ್ರಮಾಂಕದೇವ ಚರಿತ) ಮುಂತಾದವರು ಬರೆದು ಹೊಸದೊಂದು ಸಾಹಿತ್ಯ ರೂಪವನ್ನು ನಿರ್ಮಿಸಿದರು. ಇವು ವಿಷಯ ನಿರೂಪಣೆಯಲ್ಲಿ, ವಿಸ್ತಾರದಲ್ಲಿ, ಮಹಾಕಾವ್ಯಗಳೇ ಆದರೂ ಶೈಲಿಯಲ್ಲಿ, ವಿವಕ್ಷೆಯಲ್ಲಿ ಪ್ರಶಸ್ತಿ ಕಾವ್ಯಗಳೇ ಸರಿ. ತಮ್ಮ ರಾಜರನ್ನು ಪುರಾಣಯುಗದ ಕಥಾನಾಯಕರೊಡನೆ ಕೂಡಿಸಿ ವರ್ಣಿಸುವ ಕನ್ನಡದ ಪಂಪರನ್ನರು ಈ ಪ್ರಭಾವಕ್ಕೆ ಒಳಗಾದವರೆನ್ನಲಡ್ಡಿಯಿಲ್ಲ.

ಸಂಸ್ಕøತ ಲಾಕ್ಷಣಿಕರು ತಮ್ಮ ಗ್ರಂಥಗಳಲ್ಲಿ ವಿವಿಧ ಗುಣಾಲಂಕಾರಗಳಿಗೆ ಕೊಡುವ ಉದಾಹರಣೆಗಳಲ್ಲಿ ಮುಕ್ಕಾಲುಭಾಗ ರಾಜಸುತ್ತಿಯನ್ನೇ ಕುರಿತಿಸುವುದು ಗಮನಾರ್ಹ. ರಾಜಕವಿಗಳಿಗೆ ತರಬೇತಿ ಕೊಡಲೆಂದೇ ಲಾಕ್ಷಣಿಕರು ಬರೆಯುತ್ತಿದ್ದಂತೆ ಇದರಿಂದ ಭಾಸವಾಗುತ್ತದೆ. ಧನ. ಕನಕ, ಆನೆ, ಕುದುರೆ, ಛತ್ರ, ಚಾಮರ, ಸ್ವರ್ಣಾಭಿಷೇಕ, ರತ್ನಾಭಿಷೇಕ, ಬಿರುದು ಬಾವಲಿಗಳನ್ನು ಅನೇಕ ರಾಜಕವಿಗಳು ಅರಸರಿಂದ ಪಡೆದ ಉಲ್ಲೇಖಗಳಿವೆ.

ಪ್ರಶಸ್ತಿಗಳು ಗದ್ಯ, ಪದ್ಯ ಇಲ್ಲವೆ ಗದ್ಯಪದ್ಯಮಿಶ್ರವಾಗಿರಬಹುದು. ಅವುಗಳ ಶೈಲಿ ಮಾತ್ರ ಅತಿರಂಜಿತ ಅಲಂಕಾರಿಕ ಶೈಲಿ, ಹರ್ಷ, ಸಮುದ್ರಗುಪ್ತರಂತೆ ಆರ್ಹ ಚಕ್ರವರ್ತಿಗಳನ್ನು ಕುರಿತವಾದಾಗ ಪ್ರಶಸ್ತಿಗಳಲ್ಲಿ ಸಹಜಭಾವ, ಯಥಾರ್ಥ ವರ್ಣನೆಗಳಿಗೆ ಸ್ವಲ್ಪ ಅವಕಾಶವುಂಟು. ಆದರೆ ಬಹುತರವಾಗಿ ಕೃತ್ರಿಮವೂ ಅಸಹಜವೂ ಆದ ಅತಿರೇಖ ವರ್ಣನೆ ಪ್ರಶಸ್ತಿಗಳ ಕಾವ್ಯ ಗುಣವನ್ನು ಕುಗ್ಗಿಸುವುದೇ ಹೆಚ್ಚು.

ರಾಜಪ್ರಶಸ್ತಿಗಳ ಮಾದರಿಯಲ್ಲೇ ಕವಿಗಳ ಯುದ್ಧವೀರರ, ಮಹಾಸತಿಯರ ಗುಣಗಾನ ಮಾಡುವ ಪ್ರಶಸ್ತಿಗಳೂ ಉಂಟು. ಮಾಸ್ತಿಕಲ್ಲು, ವೀರಗಲ್ಲುಗಳಲ್ಲಿ ಇವನ್ನು ನೋಡಬಹುದು. ಸತ್ತವರ ಗುಣಗಾನ ಅಷ್ಟಾಗಿ ತಪ್ಪೆನಿಸದು. ಆದ್ದರಿಂದ ಸ್ಮಾರಕ ಪ್ರಶಸ್ತಿಗಳು ಹೆಚ್ಚು ಪಠನೀಯವಾಗಿವೆ.

	ಪ್ರಾಚೀನ ಗ್ರೀಕರಲ್ಲಿ ವೀರರ ಸಂಸ್ಮರಣೆಗಾಗಿ ಪಿಂಡಾರ್ ಮುಂತಾದವರು ಲಕ್ಷಣಬದ್ಧವಾಗಿ ರಚಿಸಿದ ಕೃತಿಗಳೂ ರೋಮನರಲ್ಲಿ ರಾಜ್ಯಪ್ರಶಸ್ತಿಗಾಗಿ ಮೀಸಲಾದ ರಚನೆಗಳೂ ಕ್ವಚಿತ್ತಾಗಿದೆ. ಹದಿನೆಂಟನೆಯ ಶತಮಾನದ ಇಂಗ್ಲಿಷ್ ಕವಿಗಳು ತಮ್ಮ ರಚನೆಗಳನ್ನು ಪೋಷಕರಿಗೆ ಆರ್ಪಿಸುವಾಗ ಬರೆದ ಪ್ರಶಸ್ತಿಗಳು ಕೆಲವುಂಟು. ಆದರೆ ಭಾರತದಲ್ಲಿ ಈ ಕಾವ್ಯಪ್ರಕಾರ ಬೆಳೆದಂತೆ ಪಾಶ್ಚಾತ್ಯರಲ್ಲಿ ಬೆಳೆಯಲಿಲ್ಲ. ಈ ಪರಂಪರೆಯನ್ನು ಜಾನ್‍ಸನ್ನನೇ ಕೊನೆಗಾಣಿಸಿದನೆನ್ನಬಹುದು.															(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ